ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.

ಇಲ್ಲಿ ವಿಷಯ 3 ರ ಬಗ್ಗೆ 10 ಸಂದೇಶಗಳು ಇಲ್ಲಿವೆ : ಪ್ರತಿರಕ್ಷಣೆ

 1. ಪ್ರಪಂಚದೆಲ್ಲೆಡೆ ಪೋಷಕರು ತಮ್ಮ ಮಕ್ಕಳು ಸಧೃಢರಾಗಿ ಬೆಳೆಯಲಿ ಹಾಗೂ ರೋಗಗಳಿಂದ ರಕ್ಷಣೆ ಸಿಗಲೆಂದು ಪ್ರತಿವರ್ಷವೂ ತಪ್ಪದೆ ಅವರನ್ನು ರೋಗ ಪ್ರತಿರಕ್ಷಣೆ ನೀಡಲೆಂದು ಆಸ್ಪತ್ರೆಗೆ ಕರೆದೊಯ್ಯುತ್ತಾರೆ.
 2. ಸೋಂಕು ರೋಗದಿಂದ ನರಳುವಾಗ ಸೂಕ್ಷ್ಮ ರೋಗಾಣುವೊಂದು ನಿಮ್ಮ ದೇಹವನ್ನು ಹೊಕ್ಕಿರುತ್ತದೆ. ಇದು ಇನ್ನಷ್ಟು, ಮತ್ತಷ್ಟು ರೋಗಾಣುಗಳನ್ನು ಸೃಷ್ಟಿಸಿ ನಿಮ್ಮ ದೇಹ ಸರಿಯಾಗಿ ಕೆಲಸ ಮಾಡದಂತೆ ತಡೆಯುತ್ತದೆ.
 3. ಈ ರೋಗಾಣುಗಳನ್ನು ಕೊಲ್ಲಲು ನಿಮ್ಮ ದೇಹದಲ್ಲಿ ಸೈನಿಕರಂತಹ ವಿಶೇಷ ರಕ್ಷಕರ ಇವೆ. ಇವೇ ಆಂಟಿಬಾಡಿ ಅಥವಾ ಪ್ರತಿಕಾಯಗಳು. ರೋಗಾಣುಗಳನ್ನು ಕೊಂದ ಮೇಲೆ ಪ್ರತಿಕಾಯಗಳು ನಿಮ್ಮ ದೇಹದಲ್ಲೇ ಉಳಿದು ಮತ್ತೊಮ್ಮೆ ಹೋರಾಡಲು ಅಣಿಯಾಗುತ್ತವೆ.
 4. ರೋಗ ಪ್ರತಿರಕ್ಷಣೆಯ ವೇಳೆ ಲಸಿಕೆಗಳನ್ನು ಚುಚ್ಚಿಸಿಕೊಳ್ಳುವುದರಿಂದ ಅಥವಾ ಸೇವಿಸುವುದರಿಂದ ನಿಮ್ಮ ದೇಹದೊಳಗೆ ಆಂಟಿಜನ್ನುಗಳನ್ನು ಕೂಡಿಸಲಾಗುತ್ತದೆ. ಇವು ಸೈನಿಕರಂತಹ ಪ್ರತಿಕಾಯಗಳನ್ನು ಹೇಗೆ ತಯಾರಿಸಬೇಕೆಂದು ನಿಮ್ಮ ದೇಹಕ್ಕೆ ತರಬೇತಿಯನ್ನು ನೀಡುತ್ತವೆ.
 5. ರೋಗವೊಂದರಿಂದ ನಿಮ್ಮನ್ನು ರಕ್ಷಿಸಲು ಬೇಕಾಗುವಷ್ಟು ಪ್ರತಿಕಾಯಗಳನ್ನು ದೇಹವು ತಯಾರಿಸಲು ಅನುಕೂಲ ಮಾಡಿಕೊಡಲು ಕೆಲವು ಲಸಿಕೆಗಳನ್ನು ಹಲವು ಬಾರಿ ನೀಡಬೇಕಾಗುತ್ತದೆ.
 6. ದಡಾರ, ಕ್ಷಯ, ಗಂಟಲಮಾರಿ, ನಾಯಿಕೆಮ್ಮು, ಪೋಲಿಯೋ, ಧನುರ್ವಾಯು ಮುಂತಾದ ಮರಣ ಮತ್ತು ನೋವನ್ನುಂಟು ಮಾಡುವ ಕೆಟ್ಟ ರೋಗಗಳು ಬಾರದಂತೆ ಪ್ರತಿರೋಧ ಲಸಿಕೆಗಳು ತಡೆಯಬಲ್ಲುವು.
 7. ನಿಮ್ಮ ದೇಹವನ್ನು ರೋಗದಿಂದ ರಕ್ಷಿಸಬೇಕೆಂದರೆ ಅದು ನಿಮ್ಮನ್ನು ತಾಕುವ ಮುನ್ನವೇ ಪ್ರತಿರೋಧ ಬೆಳೆಸಿಕೊಳ್ಳಬೇಕು.
 8. ಹುಟ್ಟಿದ ತಕ್ಷಣವೇ ರಕ್ಷಣೆ ಸಿಗಲೆಂದು ಶಿಶುಗಳಿಗೆ ಆ ಕೂಡಲೇ ಲಸಿಕೆಗಳನ್ನು ಕೊಡುವರು. ಇದು ತಪ್ಪಿದಲ್ಲಿ ಅನಂತರವೂ ರೋಗ ಪ್ರತಿರೋಧ ಲಸಿಕೆಗಳನ್ನು ನೀಡಬಹುದು.
 9. ವಿವಿಧ ರೋಗಗಳಿಂದ ರಕ್ಷಿಸಿಕೊಳ್ಳಲು ಮಕ್ಕಳಿಗೆ ವಿವಿಧ ವಯಸ್ಸಿನಲ್ಲಿ ರೋಗ ಪ್ರತಿರಕ್ಷಣೆಯನ್ನು ನೀಡಬಹುದು. ನಿಮ್ಮ ಸಮುದಾಯದಲ್ಲಿ ಎಲ್ಲಿ ಮತ್ತು ಎಂದು ಮಕ್ಕಳಿಗೆ ರೋಗ ಪ್ರತಿರಕ್ಷಣೆ ನೀಡುತ್ತಾರೆಂದು ತಿಳಿದುಕೊಳ್ಳಿ.
 10. ಲಸಿಕೆಯನ್ನು ನೀಡಬೇಕೆಂದಿರುವ ದಿನ ಶಿಶುಗಳು ಇಲ್ಲವೇ ಪುಟ್ಟ ಮಕ್ಕಳಿಗೆ ಹುಷಾರಿಲ್ಲದಿದ್ದರೂ ರೋಗ ಪ್ರತಿರಕ್ಷಣೆ ಸಾಧ್ಯ..

ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ (http://www.health-orb.org) ದಲ್ಲಿಯೂ ಲಭ್ಯ.

ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.

ಪ್ರತಿರೋಧ ಲಸಿಕೆಗಳು: ಮಕ್ಕಳೇನು ಮಾಡಬಹುದು?

 • ನಮ್ಮ ಭಾಷೆಯಲ್ಲಿ ನಮ್ಮದೇ ಮಾತುಗಳಲ್ಲಿ ರೋಗ ಪ್ರತಿರೋಧಕ ಲಸಿಕೆಗಳ ಬಗ್ಗೆ ನಮ್ಮದೇ ಸಂದೇಶವನ್ನು ರಚಿಸಿರಿ
 • ಈ ಸಂದೇಶಗಳನ್ನು ಮರೆಯದಂತೆ ಬಾಯಿಪಾಠ ಮಾಡಿಕೊಳ್ಳಿ!
 • ಇತರೆ ಮಕ್ಕಳು ಮತ್ತು ಕುಟುಂಬದ ಇತರೆ ಸದಸ್ಯರೊಂದಿಗೆ ಈ ಸಂದೇಶಗಳನ್ನು ಹಂಚಿಕೊಳ್ಳಿ
 • ಲಸಿಕೆಗಳನ್ನು ಹಾಕಿಸಬೇಕಾದ ದಿನಗಳ ಬಗ್ಗೆ ಪೋಸ್ಟರುಗಳನ್ನು ರಚಿಸಿ, ಎಲ್ಲರಿಗೂ ಕಾಣುವ ಜಾಗದಲ್ಲಿ ಪ್ರದರ್ಶಿಸಿ
 • ನಮ್ಮ ಹಳ್ಳಿಯಲ್ಲಿ ಮಕ್ಕಳಿಗೆ ತೊಂದರೆ ಕೊಡುತ್ತಿರುವ ಮಾರಕ ರೋಗಗಳ ಬಗ್ಗೆ ಒಂದು ನಾಟಕ ರಚಿಸಿ
 • ನಮ್ಮನ್ನು ರಕ್ಷಿಸಲು ಮಾರಕ ರೋಗಗಳ ಜೊತೆಗೆ ಹೋರಾಡುತ್ತಿರುವ ಸೂಪರ್ ಹೀರೋನ ಚಿತ್ರಗಳನ್ನು ರಚಿಸಿ, ಕಥೆ ಬರೆಯಿರಿ
 • ಗಂಟಲಮಾರಿ, ದಡಾರ ಹಾಗೂ ರುಬೆಲ್ಲಾ, ಪರ್ಟುಸಿಸ್, ಕ್ಷಯ, ಧನುರ್ವಾಯು ಹಾಗೂ ಪೋಲಿಯೋ ಮುಂತಾದ ರೋಗಗಳಲ್ಲಿ ಒಂದೆರಡನ್ನು ರೋಗ ಪ್ರತಿರಕ್ಷಣೆಯಿಂದ ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆ ಪೋಸ್ಟರನ್ನು ರಚಿಸಿ.
 • ಆಂಟಿ ಬಾಡಿ ಎನ್ನುವ ಹಾಗೂ ನಾವು ಸದಾ ಆರೋಗ್ಯವಾಗಿರುವಂತೆ ಕಾಯುವ ಮಹಾ ಶಕ್ತಿಶಾಲಿಯ ಬಗ್ಗೆ ಕಥೆಯನ್ನೋ, ನಾಟಕವನ್ನೋ ರಚಿಸಿ.
 • ಪ್ರತಿಯೊಂದು ರೋಗದ ಬಗ್ಗೆಯೂ ತಿಳಿದುಕೊಂಡು ಆ ಮಾಹಿತಿಯನ್ನು ಇತರೆ ಮಕ್ಕಳ ಜೊತೆಗೆ ಹಾಗೂ ನಿಮ್ಮ ಕುಟುಂಬದವರ ಜೊತೆಗೆ ಹಂಚಿಕೊಳ್ಳಿ
 • ಆಗ ತಾನೇ ಹುಟ್ಟಿದ ಮಗುವಿಗಾಗಿ ಗ್ರೀಟಿಂಗ್ ಕಾರ್ಡು ರಚಿಸಿ. ಅದರಲ್ಲಿ ರೋಗ ಪ್ರತಿರಕ್ಷಣೆಯ ದಿನ ಹಾಗೂ ಕಾಲಗಳನ್ನು ಬರೆದು ಹೊಸ ಶಿಶುವಿಗೆ ಮೊದಲ ವರ್ಷ ಹರ್ಷ ಹಾಗೂ ಆರೋಗ್ಯದಾಯಕವಾಗಲೆಂದು ಹಾರೈಸಿ.
 • ಪ್ರತಿರಕ್ಷಣೆಯಿಂದ ನಾವು ಕಾಪಾಡಿಕೊಳ್ಳಬಹುದಾದ ರೋಗಗಳ ಬಗ್ಗೆ ಇನ್ನಷ್ಟು ಹೆಚ್ಚು ತಿಳಿಯಿರಿ.
 • ವಿಕಲಾಂಗ ಮಕ್ಕಳಿಗೆ ನೆರವು ನೀಡುವುದು ಹೇಗೆಂಬ ಬಗ್ಗೆ ತಿಳಿದುಕೊಳ್ಳಿ.
 • ರೋಗ ಪ್ರತಿರಕ್ಷಣೆಯ ಬಗ್ಗೆ ನಮಗೆಷ್ಟು ಗೊತ್ತಿದೆ ಎನ್ನುವುದನ್ನು ತಿಳಿಯಲು ಒಂದು ಕ್ವಿಜ್ ಸಿದ್ಧ ಪಡಿಸಿ ಅದನ್ನು ನಿಮ್ಮ ಮನೆಮಂದಿ ಮತ್ತು ಗೆಳೆಯರ ಜೊತೆಗೆ ಹಂಚಿಕೊಳ್ಳಿ.
 • ಒಮ್ಮೆಗಿಂತ ಹೆಚ್ಚು ಬಾರಿ ಲಸಿಕೆ ಹಾಕಿಸಿಕೊಳ್ಳಬೇಕಾಗುವಂತಹ ರೋಗಗಳು ಯಾವುವು ತಿಳಿದುಕೊಳ್ಳಿ. ಈ ಪ್ರತಿರಕ್ಷಣೆಯನ್ನು ಯಾರಾದರೂ ಮಕ್ಕಳು ತಪ್ಪಿಸಿಕೊಂಡಿದ್ದಾರೆಯೇ ಎಂದು ಪತ್ತೆ ಮಾಡಲು ನೆರವಾಗಿ.
 • ರೋಗಗಳ ಶಕ್ತಿಯೇನು. ರೋಗ ಪ್ರತಿರಕ್ಷಣೆ ಹೇಗೆ ಈ ಶಕ್ತಿಯನ್ನು ಸೋಲಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.
 • ನಿಮ್ಮ ತರಗತಿಯಲ್ಲಿರುವ ಎಲ್ಲ ಮಕ್ಕಳೂ, ಶಿಕ್ಷಕರೂ ಪ್ರತಿರಕ್ಷಣೆ ಪಡೆದಿದ್ದಾರೆಯೇ ಎಂದು ವಿಚಾರಿಸಿ
 • ಎಲ್ಲ ಮಕ್ಕಳೂ, ಶಿಶುಗಳೂ ಪ್ರತಿರಕ್ಷಣೆ ಪಡೆಯಬಹುದಾದ ವಿಶೇಷ ದಿನಗಳು, ಸಮಾರಂಭಗಳು ಅಥವಾ ಸಪ್ತಾಹಗಳು ಇವೆಯೇ ಎಂದು ತಿಳಿದುಕೊಳ್ಳಿ.
 • ನನ್ನ ಕುಟುಂಬದಲ್ಲಿ ಯಾರಾದರೂ ಪ್ರತಿರಕ್ಷಣೆ ಪಡೆಯುವುದನ್ನು ತಪ್ಪಿಸಿಕೊಂಡಿದ್ದಾರೆಯೇ ಪತ್ತೆ ಮಾಡಿ. ಅದನ್ನು ಪಡೆಯಲು ನೆರವಾಗಿ.
 • ನಮ್ಮ ದೇಶದಲ್ಲಿ ಯಾವ ಯಾವ ವಯಸ್ಸಿನಲ್ಲಿ ನಾವು ಪ್ರತಿರಕ್ಷಣೆ ಪಡೆಯಬೇಕು ಎಂದು ಕೇಳಿ ತಿಳಿದುಕೊಳ್ಳಿ
 • ನಮ್ಮ ಕುಟುಂಬದಲ್ಲಿ ಯಾರಿಗಾದರೂ ಯಾವುದಾದರೂ ಮಾರಕ ರೋಗ ಬಂದಿತ್ತೇ? ಅವರಿಗೆನಾಯಿತು ಎಂದು ವಿಚಾರಿಸಿ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.childrenforhealth.org ಅಥವಾ clare@childrenforhealth.org ಅನ್ನು ಸಂಪರ್ಕಿಸಿ.

ಕನ್ನಡ ಲಿಪಿ Home