ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.

ಇಲ್ಲಿ ವಿಷಯ 5 ರ ಬಗ್ಗೆ 10 ಸಂದೇಶಗಳಿವೆ : ಭೇದಿ

 1. ಭೇದಿ ಎಂದರೆ ದಿನಕ್ಕೆ ಮೂರು, ನಾಲ್ಕು ಬಾರಿ ಹೋಗುವ ನೀರಿನಂತಹ ಕಕ್ಕಸು
 2. ಕಲುಷಿತ ನೀರು ಹಾಗೂ ಆಹಾರ ಸೇವಿಸುವುದರಿಂದ ಇಲ್ಲವೇ ಕೊಳಕು ಕೈ, ಚಮಚೆ ಅಥವಾ ಲೋಟೆಯನ್ನು ಬಾಯಿಗೆ ತಗುಲಿಸಿದ ಕಾರಣ ಬಾಯಿಯೊಳಗೆ ಹೋಗುವ ಸೂಕ್ಷ್ಮಜೀವಿಗಳಿಂದ ಭೇದಿ ಉಂಟಾಗುತ್ತದೆ.
 3. ಭೇದಿಯ ವೇಳೆ ನಷ್ಟವಾಗುವ ನೀರು ಹಾಗೂ ಲವಣಗಳಿಂದಾಗಿ ದೇಹ ನಿಶ್ಶಕ್ತವಾಗುತ್ತದೆ. ದ್ರವವನ್ನು ಮತ್ತೆ ಪೂರೈಸದಿದ್ದರೆ, ನಿರ್ಜಲೀಕರಣವಾಗಿ ಪುಟ್ಟ ಮಕ್ಕಳು ಸಾಯಬಹುದು.
 4. ಸುರಕ್ಷಿತವಾದ ನೀರು, ಎಳನೀರು ಅಥವಾ ಗಂಜಿಯಂತಹ ಪಾನೀಯಗಳನ್ನು ನೀಡುವ ಮೂಲಕ ಭೇದಿಯ ಅಪಾಯವನ್ನು ತಡೆಯಬಹುದು. ಶಿಶುಗಳಿಗೆ ತಾಯಿಹಾಲು ನೀಡುವುದು ಬಲು ಮುಖ್ಯ.
 5. ಭೇದಿಯಿಂದ ಬಳಲುವ ಮಕ್ಕಳ ಬಾಯಿ, ನಾಲಗೆ ಒಣಗಿರುತ್ತವೆ. ಕಣ್ಣುಗಳು ಗೂಡೊಳಗೆ ಇಳಿದಿರುತ್ತವೆ. ಕಣ್ಣೀರು ಇರುವುದಿಲ್ಲ. ಚರ್ಮ ಸಡಿಲವಾಗುತ್ತದೆ ಮತ್ತು ಅಂಗೈ, ಅಂಗಾಲುಗಳು ತಣ್ಣಗಾಗುತ್ತವೆ. ಶಿಶುಗಳ ತಲೆಯಲ್ಲಿ ಮೃದುವಾದ ಗುಳಿಯೂ ಕಾಣಿಸಬಹುದು.
 6. ದಿನದಲ್ಲಿ ಐದಕ್ಕಿಂತ ಜಾಸ್ತಿ ಬಾರಿ ನೀರು ಕಕ್ಕಸು, ರಕ್ತ ಭೇದಿ ಇಲ್ಲವೇ ವಾಂತಿಯನ್ನು ಮಾಡುವ ಮಕ್ಕಳು ವೈದ್ಯರನ್ನು ಕಾಣಲೇ ಬೇಕು.
 7. ಓ.ಆರ್.ಎಸ್. ಎಂದರೆ ಓರಲ್ ರೀಹೈಡ್ರೇಶನ್ ಸೊಲ್ಯೂಶನ್ ಎಂದರ್ಥ. ಓ.ಆರ್.ಎಸ್. ಅಂಗಡಿಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಸಿಗುತ್ತದೆ. ಅದನ್ನು ಶುಚಿಯಾದ ನೀರಿನಲ್ಲಿ ತಕ್ಕ ಪ್ರಮಾಣದಲ್ಲಿ ಕರಗಿಸಿದರೆ ಭೇದಿಯನ್ನು ತಡೆಯುವ ಅತ್ಯುತ್ತಮ ಔಷಧವಾಗುತ್ತದೆ.
 8. ಸತುವಿನ ಗುಳಿಗೆಗಳ ಹೊರತಾಗಿ ಬೇರೆ ಯಾವ ಔಷಧಗಳೂ ಆರು ತಿಂಗಳು ಮೀರಿದ ಮಕ್ಕಳ ಭೇದಿ ನಿಲ್ಲಿಸಲು ನೆರವಾಗವುದಲ್ಲ. ಇವುಗಳ ಜೊತೆಗೆ ಓ.ಆರ್.ಎಸ್. ದ್ರವವನ್ನೂ ಕುಡಿಸಬೇಕು.
 9. ಭೇದಿಯಿಂದ ಬಳಲುವ ಪುಟ್ಟ ಮಕ್ಕಳಿಗೆ ರುಚಿಯಾದ, ಮೃದುವಾಗ ಆಹಾರವನ್ನು ಆಗಾಗ್ಗೆ ನೀಡಬೇಕು. ಇದು ಅವರು ಶಕ್ತಿವಂತರಾಗಲು ನೆರವಾಗುತ್ತದೆ.
 10. ಶಿಶುಗಳಿಗೆ ಎದೆ ಹಾಲು ನೀಡುವುದರಿಂದ, ಶುಚಿಯಾಗಿರುವುದರಿಂದ, ರೋಟವೈರಸ್ ಹಾಗೂ ದಡಾರ ರೋಗಗಳ ವಿರುದ್ಧ ಪ್ರತಿರಕ್ಷಣೆ ಪಡೆಯುವುದರಿಂದ ಹಾಗೂ ಆಹಾರ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದರಿಂದ ಭೇದಿಯನ್ನು ತಡೆಗಟ್ಟಬಹುದು.

ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ (http://www.health-orb.org) ದಲ್ಲಿಯೂ ಲಭ್ಯ.

ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.

ಭೇದಿ: ಮಕ್ಕಳೇನು ಮಾಡಬಹುದು

 • ನಮ್ಮ ಭಾಷೆಯಲ್ಲಿ, ನಮ್ಮದೇ ಮಾತಿನಲ್ಲಿ ಭೇದಿ ಕುರಿತ ಸಂದೇಶಗಳನ್ನು ರಚಿಸುವುದು.
 • ಈ ಸಂದೇಶಗಳು ಮರೆತು ಹೋಗದ ಹಾಗೆ ಬಾಯಿಪಾಠ ಮಾಡುವುದು.
 • ನಮ್ಮ ಮನೆಮಂದಿ ಹಾಗೂ ಇತರೆ ಮಕ್ಕಳ ಜೊತೆಗೆ ಈ ಸಂದೇಶಗಳನ್ನು ಹಂಚಿಕೊಳ್ಳುವುದು.
 • ಸೂಕ್ಷ್ಮಜೀವಿಗಳನ್ನು ಕೊಂಡೊಯ್ಯುವ ನೊಣಗಳು ಆಹಾರದ ಬಳಿಗೆ ಬಾರದ ಹಾಗೆ ಸರಳವಾದ ನೊಣ ಹಿಡಿಯುವ ಸಾಧನಗಳನ್ನು ಮಾಡುವುದು
 • ಭೇದಿಯ ಅಪಾಯಗಳನ್ನು ಇತರರಿಗೆ ಸೂಚಿಸುವ ಪೋಸ್ಟರುಗಳನ್ನು ರಚಿಸುವುದು
 • ಭೇದಿ ಬಂದಾಗ ನಮ್ಮ ನೆರವಿಗೆ ಆರೋಗ್ಯ ಸೇವಕರನ್ನು ಯಾವಾಗ ಕರೆಯಬೇಕು ಎನ್ನುವುದನ್ನು ತಿಳಿಸುವ ಕಿರುನಾಟಕವೊಂದನ್ನು ರಚಿಸುವುದು.
 • ಭೇದಿಯನ್ನು ತಡೆಯುವುದು ಹೇಗೆ ಎಂದು ತೋರಿಸುವ ಹಾವು-ಏಣಿ ಆಟವನ್ನು ರೂಪಿಸುವುದು.
 • ಮನೆಯಲ್ಲಿ ಮತ್ತು ಶಾಲೆಯಲ್ಲಿಡಲು ಓ.ಆರ್.ಎಸ್. ಪೇಯವಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಮಾಡುವುದು
 • ಭೇದಿಯಿಂದ ನರಳುತ್ತಿರುವ ತಮ್ಮ ಮಕ್ಕಳು ಗುಣವಾಗುವಂತೆ ಮಾಡುವುದು ಹೇಗೆ ಎಂದು ಚರ್ಚಿಸುತ್ತಿರುವ ಇಬ್ಬರು ತಾಯಂದಿರ ಅಣಕು ನಾಟಕ ನಿರ್ವಹಿಸುವುದು.
 • ಮಗುವಿನ ಚಿತ್ರದಲ್ಲಿ ನಿರ್ಜಲೀಕರಣದ ಲಕ್ಷಣಗಳನ್ನು ಗುರುತಿಸುವ ಸ್ಪರ್ಧೆ ಆಡುವುದು.
 • ಗಿಡಗಳು ಬೆಳೆಯುವುದಕ್ಕೆ ನೀರು ಬೇಕು ಎನ್ನುವುದನ್ನು ನೋಡಿದ್ದೀರಲ್ಲ? ಗಿಡಗಳಿಗೆ ನೀರು ಸಿಗದಿದ್ದರೆ ಏನಾಗುತ್ತದೆ ಎಂದು ಪರೀಕ್ಷಿಸುವುದು.
 • ನಾವು ಮತ್ತು ನಾವಿರುವ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಭೇದಿ ತಡೆಯಲು ನೆರವಾಗುವುದು.
 • ಸೂಕ್ಷ್ಮ ಜೀವಿಗಳು ಎಷ್ಟು ಬೇಗ ಹರಡಬಲ್ಲವು ಎನ್ನುವುದನ್ನು ತಿಳಿದುಕೊಳ್ಳುವುದಕ್ಕಾಗಿ ಕೈ ಕುಲುಕುವ ಆಟ ಆಡುವುದು.
 • ಈ ಪ್ರಶ್ನೆಗಳನ್ನು ಕೇಳೋಣ: ಎಷ್ಟು ವಯಸ್ಸಿನವರೆಗೆ ನಮ್ಮ ಪೋಷಕರು ಎದೆಹಾಲು ಕುಡಿದಿದ್ದಾರೆ? ಸತುವು ಮತ್ತು ಓ.ಆರ್.ಎಸ್. ಬಳಸಿ ಮನೆಯಲ್ಲಿ ಭೇದಿಗೆ ಚಿಕಿತ್ಸೆ ನೀಡುವುದು ಹೇಗೆ? ಆರೋಗ್ಯ ಸೇವಕರ ನೆರವು ಬೇಕೆಂದು ಸೂಚಿಸುವ ಅಪಾಯದ ಲಕ್ಷಣಗಳು ಯಾವುವು? ಭೇದಿ ಇರುವಾಗ ಯಾವ ಪೇಯ ಕುಡಿಯಲು ಯೋಗ್ಯ? ಬಿಸಿಲನ್ನೇ ಬಳಸಿಕೊಂಡು ನೀರನ್ನು ಕುಡಿಯಲು ಸುರಕ್ಷಿತವಾಗುವಂತೆ ಮಾಡುವುದು ಹೇಗೆ? ಓ.ಆರ್.ಎಸ್. ಇಲ್ಲದಿದ್ದಾಗ ಯಾವ ದ್ರವಗಳನ್ನು ಸೇವಿಸುವುದು ಒಳ್ಳೆಯದು? ಭೇದಿ ಹಾಗೂ ಕಾಲೆರಾ ಎಂದರೇನು? ಅವು ಹೇಗೆ ಹರಡುತ್ತವೆ?

ನೊಣ ಹಿಡಿಯುವ ಸಾಧನವನ್ನು ತಯಾರಿಸುವುದಕ್ಕೆ, ಕೈಕುಲುಕುವ ಆಟ ಹಾಗೂ ಬಿಸಿಲಿನಿಂದ ನೀರನ್ನು ಶುಚಿಗೊಳಿಸುವುದು ಹೇಗೆ ಮತ್ತಿತರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು: : www.childrenforhealth.org ಅಥವಾ clare@childrenforhealth.org ಅನ್ನು ಸಂಪರ್ಕಿಸಿ.

ಕನ್ನಡ ಲಿಪಿ Home