ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.

ವಿಷಯ 6ರ ಬಗ್ಗೆ 10 ಸಂದೇಶಗಳು ಇಲ್ಲಿವೆ: ನೀರು ಮತ್ತು ನೈರ್ಮಲ್ಯ

 1. ಕೈಗಳನ್ನು ಸರಿಯಾಗಿ ತೊಳೆಯಬೇಕೆಂದರೆ ಸ್ವಲ್ಪ ಸಾಬೂನನ್ನು ಬಳಸಿ. 10 ಸೆಕೆಂಡುಗಳ ಕಾಲ ಉಜ್ಜಿದ ನಂತರ ತೊಳೆಯಿರಿ ಮತ್ತು ಗಾಳಿಯಲ್ಲಿ ಒಣಗಲು ಬಿಡಿ ಅಥವಾ ಸ್ವಚ್ಛವಾದ ಬಟ್ಟೆ/ಕಾಗದದಿಂದ ಒರೆಸಿಕೊಳ್ಳಿ, ಕೊಳಕು ಬಟ್ಟೆಯಿಂದಲ್ಲ.
 2. ನಿಮ್ಮ ಮುಖದ ಮೇಲಿನ T ಆಕಾರದ ವಲಯವನ್ನು (ಕಣ್ಣುಗಳು, ಮೂಗು ಮತ್ತು ಬಾಯಿ) ಮುಟ್ಟಿಕೊಳ್ಳುವ ಮುನ್ನ ನಿಮ್ಮ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ, ಏಕೆಂದರೆ ಈ ವಲಯದಿಂದಲೇ ರೋಗಾಣುಗಳು ದೇಹವನ್ನು ಪ್ರವೇಶಿಸುವುದು. ನಿಮಗೆ ಸಾಧ್ಯವಾದಷ್ಟೂ ಈ T ವಲಯವನ್ನು ಮುಟ್ಟಿಕೊಳ್ಳುವುದನ್ನು ತಪ್ಪಿಸಿ.
 3. ಆಹಾರ ತಯಾರಿಸುವ ಮುನ್ನ, ಆಹಾರ ಸೇವಿಸುವ ಅಥವಾ ಶಿಶುಗಳಿಗೆ ಆಹಾರ ನೀಡುವ ಮುನ್ನ, ಮೂತ್ರ, ಮಲ ವಿಸರ್ಜನೆಯ ನಂತರ ಅಥವಾ ಮಗುವನ್ನು ಸ್ವಚ್ಛಗೊಳಿಸಿದ ನಂತರ ಅಥವಾ ಯಾರಾದರೂ ಕಾಯಿಲೆಯಾದವರಿಗೆ ಸಹಾಯ ಮಾಡಿದ ನಂತರ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.
 4. ನಿಮ್ಮ ದೇಹ ಮತ್ತು ಬಟ್ಟೆಗಳನ್ನು ತಾಜಾ ಮತ್ತು ಸ್ವಚ್ಛವಾಗಿರಿಸಿಕೊಳ್ಳಿ. ನಿಮ್ಮ ಉಗುರುಗಳು ಮತ್ತು ಕಾಲ್ಬೆರಳುಗಳು, ಹಲ್ಲುಗಳು ಮತ್ತು ಕಿವಿಗಳು, ಮುಖ ಮತ್ತು ಕೂದಲನ್ನು ಸ್ವಚ್ಛವಾಗಿರಿಸಿಕೊಳ್ಳಿ. ಶೂಗಳು/ಚಪ್ಪಲಿಗಳು ಕ್ರಿಮಿಕೀಟಗಳಿಂದ ರಕ್ಷಣೆ ನೀಡುತ್ತವೆ.
 5. ರೋಗಾಣುಗಳನ್ನು ಹರಡುವಂತಹ ನೊಣಗಳುನ್ನು ಮನುಷ್ಯರ ಅಥವಾ ಪ್ರಾಣಿಗಳ ಮಲ-ಮೂತ್ರದ ಸಮೀಪ ಬಾರದಂತೆ ನೋಡಿಕೊಳ್ಳಿ. ಶೌಚಾಲಯವನ್ನು ಬಳಸಿ ಮತ್ತು ನಂತರ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.
 6. ನಿಮ್ಮ ಮುಖವನ್ನು ತಾಜಾ ಮತ್ತು ಸ್ವಚ್ಛವಾಗಿರಿಸಿಕೊಳ್ಳಿ. ಅಂಟುಳ್ಳ ಕಣ್ಣುಗಳ ಹತ್ತಿರ ನೊಣಗಳು ಗುಂಯ್‌ಗುಟ್ಟಬಹುದು, ಹೀಗಾಗಿ, ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಸ್ವಚ್ಛ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.
 7. ಸ್ವಚ್ಛವಾದ, ಸುರಕ್ಷಿತವಾದ ನೀರನ್ನು ಕೊಳಕು ಕೈಗಳು ಅಥವಾ ಲೋಟಗಳಿಂದ ಮುಟ್ಟಬೇಡಿ. ನೀರನ್ನು ರೋಗಾಣುಗಳಿಂದ ಮುಕ್ತವಾಗಿ, ಸುರಕ್ಷಿತವಾಗಿಡಿ.
 8. ಸೂರ್ಯನ ಕಿರಣಗಳು ನೀರನ್ನು ಹೆಚ್ಚು ಸುರಕ್ಷಿತವನ್ನಾಗಿ ಮಾಡುತ್ತವೆ. ನೀರನ್ನು ಪ್ಲಾಸ್ಟಿಕ್ ಬಾಟಲ್‌ನೊಳಗೆ ಶೋಧಿಸಿ ತುಂಬಿಸಿ ಮತ್ತು ಆರು ಗಂಟೆಗಳವರೆಗೆ ಹಾಗೇ ಬಿಟ್ಟುಬಿಡಿ ನಂತರ ಅದು ಕುಡಿಯಲು ಸುರಕ್ಷಿತವಾಗುತ್ತದೆ.
 9. ನಿಮಗೆ ಸಾಧ್ಯವಾದಲ್ಲಿ, ತಟ್ಟೆ ಮತ್ತು ಇತರ ಪಾತ್ರೆಗಳನ್ನು ತೊಳೆದ ನಂತರ ಒಣಗಿಸಲು ಸೂರ್ಯ ಕಿರಣಗಳನ್ನು ಬಳಸಿ, ಇದರಿಂದ ರೋಗಾಣುಗಳು ನಾಶವಾಗುತ್ತವೆ.
 10. ನೊಣಗಳನ್ನು ಕೊಲ್ಲಲು ಅಥವಾ ಕಡಿಮೆ ಮಾಡಲು ಮನೆ ಮತ್ತು ಸಮುದಾಯವನ್ನು ಕಸ ಮತ್ತು ಕೊಳಕು ಇಲ್ಲದೇ ಸ್ವಚ್ಛವಾಗಿರಿಸಿಕೊಳ್ಳಿ. ಕಸವನ್ನು ಸಂಗ್ರಹಿಸುವ, ಸುಡುವ ಅಥವ ಹೂಳುವ ತನಕ ಭದ್ರವಾಗಿ ಶೇಖರಿಸಿ.

ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ (http://www.health-orb.org) ದಲ್ಲಿಯೂ ಲಭ್ಯ.

ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.

ನೀರು ಮತ್ತು ನೈರ್ಮಲ್ಯ: ಮಕ್ಕಳು ಏನು ಮಾಡಬಹುದು?

 • ನಮ್ಮದೇ ಭಾಷೆಯಲ್ಲಿ ನಮ್ಮದೇ ಸ್ವಂತ ಪದಗಳನ್ನು ಬಳಸುತ್ತಾ ನಮ್ಮದೇ ಸ್ವಂತ ನೀರು ಮತ್ತು ನೈರ್ಮಲ್ಯದ ಸಂದೇಶಗಳನ್ನು ಸಿದ್ಧಪಡಿಸುವುದು
 • ಈ ಸಂದೇಶಗಳು ಮರೆತು ಹೋಗದ ಹಾಗೆ ಬಾಯಿಪಾಠ ಮಾಡುವುದು
 • ನಮ್ಮ ಮನೆಮಂದಿ ಹಾಗೂ ಇತರೆ ಮಕ್ಕಳ ಜೊತೆಗೆ ಈ ಸಂದೇಶಗಳನ್ನು ಹಂಚಿಕೊಳ್ಳುವುದು.
 • ನಮ್ಮ ಕೈಗಳನ್ನು ಹೇಗೆ ತೊಳೆದುಕೊಳ್ಳಬೇಕು ಎಂಬುದನ್ನು ಕಲಿಯಲು ನಮಗೆ ಸಹಾಯ ಮಾಡುವಂತಹ ಒಂದು ಹಾಡನ್ನು ಕಲಿಯುವುದು.
 • ಹಳ್ಳಿಯೊಳಗೆ ಸ್ವಚ್ಛ ಕುಟುಂಬವು ಬಂದಾಗ ಕ್ರಿಮಿಕೀಟಗಳ ಕುಟುಂಬಕ್ಕೆ ಏನಾಗುತ್ತದೆ ಎಂಬುದನ್ನು ತೋರಿಸುವಂತಹ ಒಂದು ಕಿರುನಾಟಕವನ್ನು ಸಿದ್ಧಪಡಿಸುವುದು ಅದನ್ನು ಅಭಿನಯಿಸುವುದು ಅಥವಾ ಕ್ರಿಮಿಕೀಟಗಳು ಎಲ್ಲಿ ಬಚ್ಚಿಟ್ಟುಕೊಳ್ಳಲು ಇಷ್ಟಪಡುತ್ತವೆ ಎಂಬುದನ್ನು ನಾಟಕದ ಮೂಲಕ ತೋರಿಸುವುದು.
 • ನಿಮ್ಮ ತಂಗಿ ಮತ್ತು ತಮ್ಮಂದಿರಿಗೆ ಸಹಾಯ ಮಾಡಿ ಮತ್ತು ತಮ್ಮ ಕೈಗಳನ್ನು ಹೇಗೆ ತೊಳೆದುಕೊಳ್ಳಬೇಕು ಎಂಬುದು ಅವರಿಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಿ.
 • ಜನರ ಒಂದು ಗುಂಪನ್ನು ವೀಕ್ಷಿಸುತ್ತಾ ಒಂದು ಗಂಟೆ ಕಳೆಯಿರಿ ಆ ಸಮಯದಲ್ಲಿ ಅವರು ತಮ್ಮ ಮುಖಗಳನ್ನು, ಬಟ್ಟೆಗಳನ್ನು ಅಥವಾ ಇತರ ಜನರನ್ನು ಎಷ್ಟು ಸಾರಿ ಮುಟ್ಟುತ್ತಾರೆ ಎಂಬುದನ್ನು ಗಮನಿಸಿ ಮತ್ತು ದಾಖಲಿಸಿಕೊಳ್ಳಿ.
 • ರೋಗಾಣುಗಳು ಕೈಗಳಿಂದ ದೇಹದೊಳಗೆ ಯಾವೆಲ್ಲಾ ರೀತಿಯಲ್ಲಿ ಹರಡಬಹುದು ಎಂಬುದರ ಬಗ್ಗೆ ಯೋಚಿಸಿ.
 • ಶಾಲೆಯ ಶೌಚಾಲಯ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಸೇರಿ ಒಂದು ಯೋಜನೆಯನ್ನು ರೂಪಿಸಿ.
 • ಒಂದು ಶೋಧಕವನ್ನು ಬಳಸುತ್ತಾ ನೀರನ್ನು ಹೇಗೆ ಸ್ವಚ್ಛಗೊಳಿಸಬೇಕೆಂಬುದನ್ನು ಕಲಿಯಿರಿ.
 • ಶಾಲೆಯ ಆವರಣವನ್ನು ಸ್ವಚ್ಛವಾಗಿ, ಕಸ-ಕೊಳಕು ಇಲ್ಲದೇ ಇರಿಸಲು ಒಂದು ಯೋಜನೆಯನ್ನು ಸಿದ್ಧಪಡಿಸಿ.
 • ಶಾಲೆಯಲ್ಲಿ ಒಂದು ನೈರ್ಮಲ್ಯದ ಕೂಟವನ್ನು ಆರಂಭಿಸಿ.
 • ನೊಣಗಳು, ಕೊಳಕು ಮತ್ತು ರೋಗಾಣುಗಳ ಬಗ್ಗೆ ನಮಗೆ ಏನು ತಿಳಿದಿದೆಯೋ ಅದನ್ನು ಕುಟುಂಬಗಳ ಜೊತೆ ಹಂಚಿಕೊಳ್ಳಿ.
 • ನೀರನ್ನು ತುಂಬಿಸುವ ಪಾತ್ರೆಯನ್ನು ಸ್ವಚ್ಛವಾಗಿರಿಸಿ ಮತ್ತು ಅದನ್ನು ಮುಚ್ಚಿಡಿ ಹಾಗು ಯಾವಾಗಲೂ ಒಂದು ಸೌಟನ್ನು ಬಳಸಿ, ಎಂದೂ ನಮ್ಮ ಲೋಟ ಅಥವಾ ಕೈಗಳನ್ನು ಬಳಸಬಾರದು. ಒಂದು ಪಾತ್ರೆಯಿಂದ ನೀರನ್ನು ಹೇಗೆ ತೆಗೆದುಕೊಳ್ಳಬೇಕೆಂದು ನಿಮ್ಮ ತಮ್ಮಂದಿರಿಗೆ ಮತ್ತು ತಂಗಿಯರಿಗೆ ತೋರಿಸಿ.
 • ಒಂದು ಟಿಪ್ಪಿ ಟ್ಯಾಪ್ ಅನ್ನು ಸಿದ್ಧಪಡಿಸಲು ಒಟ್ಟಿಗೆ ಕೆಲಸ ಮಾಡಿ!
 • ನಮ್ಮ ದೇಹವನ್ನು ತೊಳೆದುಕೊಳ್ಳಲು ಬೇಕಾಗುವಂತಹ ಸೋಪನ್ನು ಇರಿಸಲು ವಾಶ್ ಮಿಟ್ಟ್ ಅನ್ನು ಹೇಗೆ ಸಿದ್ಧಪಡಿಸುವುದು.
 • ಒಂದು ಪ್ಲಾಸ್ಟಿಕ್ ಬಾಟಲ್ ಹಾಗು ಸ್ವಲ್ಪ ಸಕ್ಕರೆ ನೀರು ಅಥವಾ ಮಲದೊಂದಿಗೆ ಒಂದು ನೊಣದ ಬಲೆಯನ್ನು ಸಿದ್ಧಪಡಿಸಿ!
 • ಸೂರ್ಯನ ಕಿರಣಗಳನ್ನು ಬಳಸುತ್ತಾ ಮನೆಯಲ್ಲಿ ಸ್ವಚ್ಛವಾದ ಕುಡಿಯುವ ನೀರನ್ನು ಸಿದ್ಧಪಡಿಸಲು ಸಹಾಯ ಮಾಡಿ.
 • ಕೊಳಕು ನೀರನ್ನು ಸ್ವಚ್ಛಗೊಳಿಸಲು ಒಂದು ಮರಳಿನ ಶೋಧಕವನ್ನು ಸಿದ್ಧಪಡಿಸಿ.
 • ನಮ್ಮ ಸಮುದಾಯದಲ್ಲಿ ನೀರು ಪೂರೈಕೆ ಹೇಗಾಗುತ್ತದೆ ಹಾಗು ಅದು ಕುಡಿಯಲು ಸುರಕ್ಷಿತವೋ ಅಲ್ಲವೋ ಎಂಬುದನ್ನು ತಿಳಿಸುವ ನಕ್ಷೆಯನ್ನು ಸಿದ್ಧಪಡಿಸಿ.
 • ಅಡುಗೆ ಮಾಡುವ ಪಾತ್ರೆಗಳು ಮತ್ತು ನಮ್ಮ ತಟ್ಟೆಗಳನ್ನು ಸೂರ್ಯನ ಕಿರಣಗಳಡಿ ಒಣಗಿಸಲು ಸಾಧ್ಯವಾಗುವಂತೆ ಒಂದು ಒಣಗಿಸುವ ಕಪಾಟನ್ನು ತಯಾರಿಸಿ.
 • ಇವುಗಳನ್ನು ಕೇಳಿ – ನಾವು ನಮ್ಮ ಕೈಗಳನ್ನು ಸ್ವಚ್ಛವಾಗಿ ರೋಗಾಣುಗಳಿಲ್ಲದಂತೆ ಹೇಗೆ ಇರಿಸಿಕೊಳ್ಳುವುದು? ಮನೆಯಲ್ಲಿ ಕೈಗಳನ್ನು ತೊಳೆಯಲು ನಮ್ಮ ಬಳಿ ಸಾಬೂನು ಇದೆಯೇ? ಹತ್ತಿರದ ಅಂಗಡಿಯಲ್ಲಿ ಸೋಪ್ ಬೆಲೆ ಏನು? ನಮ್ಮ ದೇಹವನ್ನು ಸ್ವಚ್ಛವಾಗಿರಿಕೊಳ್ಳುವುದು ಹೇಗೆ? ನಮ್ಮ ಹಲ್ಲುಗಳನ್ನು ಉಜ್ಜುವುದು ಹೇಗೆ? ರೋಗಾಣುಗಳು ಎಲ್ಲಿಂದ ಬರುತ್ತವೆ, ಎಲ್ಲಿ ವಾಸಿಸುತ್ತವೆ ಮತ್ತು ಅವು ಹೇಗೆ ಹರಡುತ್ತವೆ? ನೊಣಗಳು ಹೇಗೆ ಬದುಕುತ್ತವೆ, ಹೇಗೆ ತಿನ್ನುತ್ತವೆ ಮತ್ತು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ? ನೊಣಗಳು ಹೇಗೆ ತಮ್ಮ ಕಾಲುಗಳಲ್ಲಿ ಕೊಳಕನ್ನು ಒಯ್ಯುತ್ತವೆ? ನಮ್ಮ ನೀರಿನ ಮೂಲಗಳು ಯಾವುವು? ನಾವು ಕೊಳಕು ನೀರನ್ನು ಕುಡಿಯಲು ಸುರಕ್ಷಿತವಾಗಿರುವಂತೆ ಹೇಗೆ ಮಾಡಬಹುದು? ನಮಗೆ ಪ್ಲಾಸ್ಟಿಕ್ ಬಾಟಲ್‌ಗಳು ಎಲ್ಲಿ ದೊರೆಯುತ್ತವೆ? ನೀರಿನ ಶೋಧಕವಾಗಿ ಯಾವ ಬಟ್ಟೆಯನ್ನು ಬಳಸಬಹುದು? ಆಹಾರವನ್ನು ತಯಾರಿಸುವಾಗ ಕುಟುಂಬದ ಸದಸ್ಯರು ಯಾವೆಲ್ಲಾ ನೈರ್ಮಲ್ಯದ ಅಭ್ಯಾಸಗಳನ್ನು ಅನುಸರಿಸುತ್ತಾರೆ? ಮನೆ ಅಥವಾ ಸಮುದಾಯದಲ್ಲಿ ಹೆಚ್ಚಿನಂಶ ರೋಗಾಣುಗಳನ್ನು ಹೊಂದಿರಬಹುದಾದ ಸ್ಥಳಗಳಾವುವು?

ನೊಣದ ಬಲೆ, ನೀರನ್ನು ಶುದ್ಧೀಕರಿಸಲು ಸೂರ್ಯ ಕಿರಣಗಳ ಬಳಕೆ, ಮರಳಿನ ಶೋಧಕವನ್ನು ಹೇಗೆ ಸಿದ್ಧಪಡಿಸುವುದು, ತೊಳೆಯುವಿಕೆ ಮಿಟ್ ಅಥವಾ ಟಿಪ್ಪಿ ಟ್ಯಾಪ್ ಅಥವಾ ಬೇರೆ ಯಾವುದರ ಕುರಿತಾದರೂ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.childrenforhealth.org ಅಥವ clare@childrenforhealth.org ಅನ್ನು ಸಂಪರ್ಕಿಸಿ

ಕನ್ನಡ ಲಿಪಿ Home