ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.

ಇಲ್ಲಿ ವಿಷಯ 4 ರ ಬಗ್ಗೆ 10 ಸಂದೇಶಗಳಿವೆ : ಮಲೇರಿಯಾ

 1. ಮಲೇರಿಯಾ ಎನ್ನುವುದು ಸೋಂಕು ತಗುಲಿದ ಸೊಳ್ಳೆಯಿಂದ ಹರಡುವ ರೋಗ
 2. ಮಲೇರಿಯಾ ಹಾನಿಕರ ರೋಗ. ವಿಶೇಷವಾಗಿ ಮಕ್ಕಳು ಹಾಗೂ ಬಸುರಿ ಹೆಂಗಸರಲ್ಲಿ ಅದು ಜ್ವರವನ್ನು ಉಂಟು ಮಾಡಬಹುದು. ಕೊಲ್ಲಲೂ ಬಹುದು.
 3. ಸೊಳ್ಳೆಗಳನ್ನು ಕೊಲ್ಲುವ ಔಷಧವನ್ನು ಹಚ್ಚಿದ ಪರದೆಯೊಳಗೆ ಮಲಗಿ ಸೊಳ್ಳೆಗಳು ಕಚ್ಚದಂತೆ ಕಾಪಾಡಿಕೊಳ್ಳಿ. ಮಲೇರಿಯವನ್ನು ತಡೆಯಿರಿ.
 4. ಮಲೇರಿಯಾ ಸೊಳ್ಳೆಗಳು ಸಾಮಾನ್ಯವಾಗಿ ಮುಸ್ಸಂಜೆಯಾದ ಮೇಲೆ, ಬೆಳಗಾಗುವ ಮುನ್ನ ಕಚ್ಚುತ್ತವೆ.
 5. ಮಲೇರಿಯಾ ಸೋಂಕಿದಾಗ ಮಕ್ಕಳ ಬೆಳವಣಿಗೆ ನಿಧಾನವಾಗಬಹುದು.
 6. ಸೊಳ್ಳೆಗಳನ್ನು ಕೊಲ್ಲಲು ಮನೆಗಳಲ್ಲಿ, ಗಾಳಿಯಲ್ಲಿ ಹಾಗೂ ಸೊಳ್ಳೆ ಬೆಳೆಯುವ ನೀರಿನಲ್ಲಿ- ಈ ಮೂರು ಕಡೆಗಳಲ್ಲೂ ಕೀಟನಾಶಕಗಳನ್ನು ಸಿಂಪಡಿಸಬೇಕು.
 7. ಅತಿ ಜ್ವರ, ತಲೆನೋವು, ಮೈಕೈನೋವು, ಹೊಟ್ಟೆ ನೋವು ಹಾಗೂ ಛಳಿ ಮಲೇರಿಯಾದ ರೋಗಲಕ್ಷಣಗಳು. ತಕ್ಷಣವೇ ಪರೀಕ್ಷಿಸಿ, ಚಿಕಿತ್ಸೆ ನೀಡಿದರೆ ಜೀವವನ್ನು ಉಳಿಸಬಹುದು.
 8. ಆರೋಗ್ಯ ಸೇವಕರು ಸೂಚಿಸುವ ಔಷಧಿಗಳಿಂದ ಮಲೇರಿಯಾವನ್ನು ಗುಣಪಡಿಸಬಹುದು, ತಡೆಯಬಹುದು.
 9. ಮಲೇರಿಯಾ ಜೀವಿಯು ರೋಗಿಯ ರಕ್ತದಲ್ಲಿ ಇರುತ್ತದೆ. ಇದು ರಕ್ತಹೀನತೆ ಉಂಟು ಮಾಡುವುದರಿಂದ ಸುಸ್ತು ಹಾಗೂ ನಿಶ್ಶಕ್ತಿ ಉಂಟಾಗುತ್ತದೆ.
 10. ಮಲೇರಿಯಾ ಹೆಚ್ಚಿರುವ ಪ್ರದೇಶಗಳಲ್ಲಿ ಹಾಗೂ ಮಲೇರಿಯಾ ಹೆಚ್ಚಾಗುವ ಸಮಯಗಳಲ್ಲಿ ಮಲೇರಿಯಾ ಔಷಧಿ ಗುಳಿಗೆಗಳನ್ನು ಸೇವಿಸುವುದರಿಂದ ಮಲೇರಿಯಾವನ್ನೂ, ರಕ್ತಹೀನತೆಯನ್ನೂ ಕಡಿಮೆ ಮಾಡಬಹುದು.

ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ (http://www.health-orb.org) ದಲ್ಲಿಯೂ ಲಭ್ಯ.

ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.

ಮಲೇರಿಯಾ: ಮಕ್ಕಳು ಏನೆಲ್ಲ ಮಾಡಬಹುದು?

 • ಮಲೇರಿಯಾ ಬಗ್ಗೆ ನಮ್ಮದೇ ಮಾತುಗಳಲ್ಲಿ ನಮ್ಮ ಭಾಷೆಯಲ್ಲಿ ಸಂದೇಶಗಳನ್ನು ರಚಿಸುವುದು!
 • ಸಂದೇಶಗಳು ಮರೆತು ಹೋಗದಂತೆ ಅವನ್ನು ಬಾಯಿಪಾಠ ಮಾಡುವುದು!
 • ಇತರೆ ಮಕ್ಕಳು ಹಾಗೂ ಕುಟುಂಬದವರ ಜೊತೆಗೆ ಸಂದೇಶಗಳನ್ನು ಹಂಚಿಕೊಳ್ಳುವುದು.
 • ಮಲೇರಿಯಾ ಹೇಗೆ ಹರಡುತ್ತದೆ? ಅದನ್ನು ತಡೆಯುವ ಹೋರಾಟದಲ್ಲಿ ನಾವು ಹೇಗೆ ಭಾಗಿಯಾಗಬಹುದು ಎನ್ನುವುದನ್ನು ಇತರರಿಗೆ ತೋರಿಸಲು ಪೋಸ್ಟರುಗಳನ್ನು ರಚಿಸುವುದು.
 • ಸೊಳ್ಳೆಗಳ ಜೀವನಚಕ್ರದ ಬಗ್ಗೆ ಇತರೆ ಮಕ್ಕಳಿಗೆ ಅರಿವು ಮೂಡಿಸಲು ಕಥೆಗಳನ್ನು ಬರೆಯುವುದು, ನಾಟಕ ನಿರ್ವಹಿಸುವುದು.
 • ಕೀಟನಾಶಕಗಳಲ್ಲಿ ಅದ್ದಿದ ಸೊಳ್ಳೆಪರದೆಗಳನ್ನು ಹೇಗೆ ಬಳಸಬೇಕು, ಹೇಗೆ ಜಾಗ್ರತೆ ವಹಿಸಬೇಕು ಎನ್ನುವುದನ್ನು ತೋರುವ ಪೋಸ್ಟರುಗಳನ್ನು ರಚಿಸುವುದು
 • ಸೊಳ್ಳೆ ಕಡಿಯುವುದನ್ನು ತಪ್ಪಿಸುವುದು ಹೇಗೆ ಎಂದು ಇತರರಿಗೆ ತಿಳಿಸುವಂತಹ ಕಥೆಗಳನ್ನು ಹೇಳುವುದು
 • ಮಗುವಿನಲ್ಲಿರುವ ಮಲೇರಿಯಾ ಲಕ್ಷಣಗಳನ್ನು ಬೇರೊಂದು ಮಗು ಹೇಗೆ ಗುರುತಿಸಿ, ಮಗುವನ್ನು ರಕ್ತ ಪರೀಕ್ಷೆಗೆ ಕರೆದೊಯ್ಯಿರಿ ಎಂದು ದೊಡ್ಡವರಿಗೆ ಹೇಳುವ ಕಥೆಯನ್ನೋ, ನಾಟಕವನ್ನೋ ರಚಿಸುವುದು.
 • ಮಲೇರಿಯಾ ಹಾಗೂ ರಕ್ತಹೀನತೆಯ ಲಕ್ಷಣಗಳನ್ನು ವಿವರಿಸುವ ಕಥೆ ಅಥವಾ ನಾಟಕಗಳನ್ನು ರಚಿಸುವುದು. ಹುಳುಗಳು ಹಾಗೂ ಮಲೇರಿಯಾ ಹೇಗೆ ರಕ್ತಹೀನತೆಗೆ ಕಾರಣವಾಗುತ್ತವೆ ಎಂದು ವಿವರಿಸುವುದು.
 • ನಮ್ಮ ಸುತ್ತಮುತ್ತಲಿರುವ ಕಬ್ಬಿಣದ ಅಂಶ ಸಮೃದ್ಧವಾಗಿರುವ ಆಹಾರಗಳ ಪೋಸ್ಟರುಗಳನ್ನು ಬರೆಯುವುದು
 • ಸೊಳ್ಳೆಗಳು ಕಚ್ಚುವ ಸಂದರ್ಭದಲ್ಲಿ ಸಣ್ಣ ಮಕ್ಕಳು ಸೊಳ್ಳೆ ಪರದೆಯೊಳಗೆ ಇರುವುದಕ್ಕೆ ನೆರವು ನೀಡುವುದು!
 • ಸೊಳ್ಳೆ ಪರದೆಗಳಲ್ಲಿ ತೂತುಗಳು ಇಲ್ಲದ ಹಾಗೆ ಮತ್ತು ಅವು ಭದ್ರವಾಗಿ ಒಳಮಡಚಿಕೊಂಡಿರುವುದನ್ನು ಖಾತ್ರಿ ಮಾಡಿಕೊಳ್ಳುವುದು.
 • ಸೊಳ್ಳೆ ಪರದೆಗಳನ್ನು ಜನರು ಏಕೆ ಇಷ್ಟ ಪಡುವುದಿಲ್ಲ ಅಥವ ಪಡುತ್ತಾರೆ? ಸೊಳ್ಳೆ ಪರದೆಗಳಿಂದ ಏನಾಗುತ್ತದೆ ಎಂದು ಜನರ ನಂಬಿಕೆ ಎನ್ನುವುದನ್ನು ಕುರಿತು ಕಥೆಗಳನ್ನೂ, ನಾಟಕಗಳನ್ನೂ ರಚಿಸುವುದು.
 • ಸೊಳ್ಳೆ ಪರದೆಗಳನ್ನು ಬಳಸುವುದು ಹೇಗೆ ಎಂದು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು.
 • ಸೊಳ್ಳೆ ಪರದೆಗಳು ಹಾಗೂ ರಕ್ತ ಪರೀಕ್ಷೆಗಳ ಬಗ್ಗೆ ಮಾತನಾಡಲು ನಮ್ಮ ಶಾಲೆಗೆ ಆರೋಗ್ಯ ಸೇವಕರನ್ನು ಆಹ್ವಾನಿಸಿವುದು.
 • ಸಂದೇಶಗಳನ್ನು ಇತರರ ಜೊತೆಗೆ ಹಂಚಿಕೊಳ್ಳಲು ಹಾಡು, ಕುಣಿತ ಮತ್ತು ನಾಟಕಗಳನ್ನು ಬಳಸುವುದು.
 • ನಮ್ಮ ಕುಟುಂಬದಲ್ಲಿ ಎಷ್ಟು ಜನರಿಗೆ ಮಲೇರಿಯಾ ಸೋಂಕಿತ್ತು? ನಾವು ಮಲೇರಿಯಾವನ್ನು ಹೇಗೆ ತಡೆಯಬಹುದು? ಬಹಳ ಕಾಲ ಬಳಸಿದಂತಹ ಔಷಧ ಹಚ್ಚಿದ ಸೊಳ್ಳೆ ಪರದೆಗಳನ್ನು ನಾವು ಯಾವಾಗ ಬಿಸಾಡಬೇಕು? ಕಿಟಕಿಯ ಪರದೆಗಳನ್ನು ಯಾವಾಗ ಬಳಸಬೇಕು ಮತ್ತು ಅವು ಹೇಗೆ ಕೆಲಸ ಮಾಡುತ್ತವೆ?ನಮ್ಮ ಸಮುದಾಯದವರಿಗೆ ಸೊಳ್ಳೆ ಪರದೆಗಳು ಯಾವಾಗ ಸಿಗುತ್ತವೆ? ಮಲೇರಿಯಾದಿಂದ ಸಾವು ಏಕೆ ಆಗುತ್ತದೆ? ಮಲೇರಿಯಾ ಬಸುರಿಯರಿಗೆ ಹಾಗೂ ಸಣ್ಣ ಮಕ್ಕಳಿಗೆ ವಿಶೇಷವಾಗಿ ಹಾನಿಕರ. ಏಕೆ? ಬಸುರಿ ಮಹಿಳೆಯರಿಗೆ ಮಲೇರಿಯಾ ಬಾರದಂತೆ ತಡೆಯಲು ಆರೋಗ್ಯ ಸೇವಕರು ಅವರಿಗೆ ಏನನ್ನು ಕೊಡುತ್ತಾರೆ ಮತ್ತು ಯಾವ ಬಸುರಿನ ಯಾವ ಸಮಯದಲ್ಲಿ ಕೊಡುತ್ತಾರೆ? ಕಬ್ಬಿಣದ ಅಂಶ ಹೆಚ್ಚಿರುವ ಮಾಂಸ, ಹಸಿರು ತರಕಾರಿಗಳು, ಸೊಪ್ಪು ಮುಂತಾದುವು ರಕ್ತಹೀನತೆಯನ್ನು ತಡೆಯಲು ಹೇಗೆ ನೆರವಾಗುತ್ತವೆ? ಒಬ್ಬರನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರನ್ನು ಕಚ್ಚದಂತೆ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹೇಗೆ? ರಕ್ತದಲ್ಲಿ ಮಲೇರಿಯಾ ಇದೆಯೇ ಎಂದು ಪರೀಕ್ಷಿಸುವ ವಿಶೇಷ ಪರೀಕ್ಷೆಗಳ ಹೆಸರೇನು?

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.childrenforhealth.org ಅಥವಾ clare@childrenforhealth.org ಅನ್ನು ಸಂಪರ್ಕಿಸಿ.

ಕನ್ನಡ ಲಿಪಿ Home